1935-2000. ನವ್ಯಪೀಳಿಗೆಯ ಪ್ರಸಿದ್ಧ ಲೇಖಕರು.  ಚಲನಚಿತ್ರ ನಿರ್ದೇಶಕರು. ಲಂಕೇಶ್ ಪತ್ರಿಕೆ ಎಂಬ ವಿಶಿಷ್ಟಬಗೆಯ ಪತ್ರಿಕೆಯನ್ನು ಪ್ರಕಟಿಸಿ ಕನ್ನಡ ಪತ್ರಿಕಾ ಲೋಕದಲ್ಲಿಯೂ ಹೆಸರಾದವರು. ಶಿವಮೊಗ್ಗ ಜಿಲ್ಲೆಯ ಕೊನಗವಳ್ಳಿಯಲ್ಲಿ 1935 ಮಾರ್ಚ್ 8ರಂದು ಜನಿಸಿದರು. ಇವರ ಮನೆತನದವರು ಮೊದಲು ಹರಿಹರದ ಬಳಿಯ ನಂದಿತಾವರೆಯಲ್ಲಿದ್ದರು. ಇವರ ತಾತ ಕೊನಗವಳ್ಳಿಗೆ ಬಂದು ನೆಲಸಿದರು. ತಾಯಿತಂದೆಗೆ ಐದನೆಯ ಮಗುವಾಗಿ ಹುಟ್ಟಿದ ಇವರಿಗೆ ಮೂವರು ಸೋದರಿಯರು ಮತ್ತು ಒಬ್ಬ ಸೋದರ. ಅವರ ಪೈಕಿ ಲಂಕೇಶ್ ಒಬ್ಬರೇ ಉನ್ನತ ಶಿಕ್ಷಣ ಪಡೆದವರು. ಎಳೆತನದಲ್ಲೇ ಲಂಕೇಶರಿಗೆ ಓದುವ ಅಭ್ಯಾಸ ಬೆಳೆದದ್ದು ಇವರ ಹಳ್ಳಿಯಲ್ಲಿ ವಯಸ್ಕರ ಶಿಕ್ಷಣ ಪಡೆದವರಿಗಾಗಿ ತೆರೆಯಲಾಗಿದ್ದ ಪುಸ್ತಕ ಭಂಡಾರದಿಂದಾಗಿ. ಪ್ರತಿಯೊಂದು ಸಂಸಾರವೂ ಒಂದಿಲ್ಲೊಂದು ರೀತಿಯಲ್ಲಿ ಅಸುಖಿಯೇ ಎಂಬುದು ಗೊತ್ತಾಗುವ ವೇಳೆಗೆ ಇವರು ಅಂತರ್ಮುಖಿಯಾಗಿದ್ದರು. ಮನೆಯಲ್ಲಿದ್ದ ಜೈಮಿನಿ ಭಾರತ, ವೀರಶೈವ ಗ್ರಂಥಗಳನ್ನು ಓದುವುದರಲ್ಲಿ ಬಾಹ್ಯಪ್ರಪಂಚದ ವಾಸ್ತವತೆಯನ್ನು ಮರೆಯಲು ಯತ್ನಿಸುತ್ತಿದ್ದರು.

	ಪ್ರೌಢಶಾಲೆಯಲ್ಲಿ ಉತ್ತಮ ವಿದ್ಯಾರ್ಥಿ ಎನಿಸಿಕೊಂಡಿದ್ದ ಇವರು ವೈದ್ಯಶಿಕ್ಷಣ ಪಡೆಯಬೇಕೆಂಬುದು ತಂದೆತಾಯಿಯರ ಇಚ್ಛೆಯಾಗಿತ್ತು.  ಆದರೆ ಇವರು ಲೇಖಕರಾಗಿ ವಿಕಾಸಗೊಳ್ಳುತ್ತಿದ್ದರು. ಅಧ್ಯಾಪಕರೊಬ್ಬರ ವರ್ತನೆಗೆ ಪ್ರತಿಭಟನೆಯಾಗಿಯೇ ಇವರು ಬರೆಯತೊಡಗಿದ್ದು. ಹೀಗಾಗಿ ಸ್ವೀಕೃತವಾದ, ಸಂಭಾವಿತವೆನಿಸಿಕೊಂಡ ವ್ಯವಸ್ಥೆಯ ಹಾಗೂ ವಿಚಾರಗಳ ಪ್ರತಿಭಟನೆಯಾಗಿ, ಬಂಡಾಯದ ಸಂಕೇತವಾಗಿ ಇವರು ಲೇಖನಿಯನ್ನು ರೂಪಿಸಿಕೊಂಡಿದ್ದಾರೆನ್ನಬಹುದು.

	ಇವರು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. (ಆನರ್ಸ್) ಮತ್ತು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿ ಶಿವಮೊಗ್ಗದ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾದರು (1952-62). ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಮೂರುವರ್ಷ (1962-65), ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಒಂದು ವರ್ಷ ಬೋಧಿಸಿ, ಬಳಿಕ 1966ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಸೇರಿ 1978ರಲ್ಲಿ ಅಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿದರು. ಅನಂತರ ಪ್ರಜಾವಾಣಿ ಪತ್ರಿಕೆಗೆ ಅಂಕಣ ಬರೆಯಲು ಪ್ರಾರಂಭಿಸಿ (ಬಂ ಮತ್ತು ಗುಂ) ತಾವೇ ಸಂಪಾದಕರಾಗಿ ‘ಲಂಕೇಶ್ ಪತ್ರಿಕೆ’ಯನ್ನು ಆರಂಭಿಸಿದರು (1980 ಜುಲೈ). ಈ ಪತ್ರಿಕೆಯಲ್ಲಿ ಇವರು ಬರೆಯುತ್ತಿದ್ದ ಟೀಕೆ ಟಿಪ್ಪಣಿ ಎಂಬ ಅಂಕಣ ಅತ್ಯಂತ ಜನಪ್ರಿಯವಾಗಿತ್ತು.

	ಲಂಕೇಶರ ಮೊದಲನೆಯ ಕೃತಿ ಕೆರೆಯ ನೀರನು ಕೆರೆಗೆ ಚೆಲ್ಲಿ (1963) ಎಂಬುದು ಸಣ್ಣಕಥೆಗಳ ಸಂಕಲನ. ನಾನಲ್ಲ (1970), ಉಮಾಪತಿಯ ಸ್ಕಾಲರ್‍ಷಿಪ್ ಯಾತ್ರೆ (1973), ಕಲ್ಲುಕರಗುವ ಸಮಯ (1990), ಉಲ್ಲಂಘನೆ (1996) ಇವರ ಇನ್ನಿತರ ಸಣ್ಣಕಥಾಸಂಕಲನಗಳು.  ಬಿಚ್ಚು ಹಾಗೂ ತಲೆಮಾರು-ಕವನ ಸಂಕಲನಗಳು. 1950-70ರ ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕವನಗಳ ಪೈಕಿ ಕೆಲವನ್ನು ಆಯ್ದು ಸಂಗ್ರಹಿಸಿ ಅಕ್ಷರ ಹೊಸ ಕಾವ್ಯ ಎಂಬ ಹೆಸರಿನಲ್ಲಿ ಇವರು ಪ್ರಕಟಿಸಿದ್ದಾರೆ (1970). ಬೋದಿಲೇರ್ ಕವಿಯ ಕವನಗಳನ್ನು ಅನುವಾದಿಸಿ ಪಾಪದ ಹೂವುಗಳು ಎಂಬ ಗ್ರಂಥವನ್ನು ಪ್ರಕಟಿಸಿದ್ದಾರೆ. ಟಿ.ಪ್ರಸನ್ನನ ಗೃಹಸ್ಥಾಶ್ರಮ (1964), ತೆರೆಗಳು (1965), ನನ್ನ ತಂಗಿಗೊಂದು ಗಂಡುಕೊಡಿ, ಗಿಳಿಯು ಪಂಜರದೊಳಿಲ್ಲ, ಸಿದ್ಧತೆ, ಪೋಲೀಸರಿದ್ದಾರೆ ಎಚ್ಚರಿಕೆ, ಕ್ರಾಂತಿ ಬಂತು ಕ್ರಾಂತಿ, ಸಂಕ್ರಾಂತಿ, ಗುಣಮುಖ ಇವು ಇವರ ನಾಟಕಗಳು.  ಆಷಾಢಭೂತಿತನ, ಸಿನಿಕತೆ, ವ್ಯವಸ್ಥೆಯ ನಿಷ್ಫಲತೆಯ ಬಗ್ಗೆ ಹತಾಶೆ, ಆಕ್ರೋಶ, ಸಾಮಾಜಿಕ ಅಸಮಾನತೆಯ ವಿರುದ್ಧ ಪ್ರತಿಭಟನೆ ಇವರ ಎಲ್ಲ ನಾಟಕಗಳ ಮುಖ್ಯ ವಸ್ತು. ದೊರೆ ಈಡಿಪಸ್ ಹಾಗೂ ಅಂತಿಗೊನೆ-ಇವು ಪ್ರಮುಖ ಅನುವಾದಿತ ನಾಟಕಗಳು. ಬಿರುಕು (1967), ಮುಸ್ಸಂಜೆಯ ಕಥಾಪ್ರಸಂಗ (1978) ಮತ್ತು ಅಕ್ಕ (1991)-ಇವರ ಕಾದಂಬರಿಗಳು.

ಪ್ರಸ್ತುತ (1970), ಕಂಡದ್ದು ಕಂಡ ಹಾಗೆ (1975), ಟೀಕೆಟಿಪ್ಪಣಿ (ಎರಡು ಭಾಗಗಳಲ್ಲಿ) ಇವು ಇವರ ಲೇಖನ, ಭಾಷಣ, ಅಂಕಣ ಬರೆಹಗಳ ಸಂಕಲನ.  ಈ ಕೃತಿಗಳಲ್ಲಿ ಸಾಹಿತ್ಯವನ್ನು ಕುರಿತ ಇವರ ಧೋರಣೆ, ಸ್ವವಿಮರ್ಶೆ, ಲೋಕವನ್ನು ಇವರು ನೋಡುವ ದೃಷ್ಟಿ ವ್ಯಕ್ತವಾಗಿವೆ. ಹುಳಿಮಾವಿನ ಮರ (1997) ಇವರ ಆತ್ಮಕಥನ.

ಸಾಹಿತ್ಯದಲ್ಲಿ ಹೇಗೋ ಹಾಗೆ ಚಲನಚಿತ್ರದಲ್ಲೂ ಇವರು ಪ್ರಯೋಗಶೀಲರೆನಿಸಿದ್ದಾರೆ. ಪಲ್ಲವಿ, ಅನುರೂಪ, ಖಂಡವಿದೆಕೋ ಮಾಂಸವಿದೆಕೋ, ಎಲ್ಲಿಂದಲೋ ಬಂದವರು ಎಂಬ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಪಲ್ಲವಿಯ ಉತ್ತಮ ನಿರ್ದೇಶನಕ್ಕಾಗಿ (1976) ಕೇಂದ್ರ ಸರ್ಕಾರದ ಬಹುಮಾನ ಇವರಿಗೆ ದೊರಕಿದೆ. ಇವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವಪ್ರಶಸ್ತಿ (1986), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1993) ದೊರೆತಿವೆ. ಇವರು 2000 ಜನವರಿ 26 ರಂದು ನಿಧನರಾದರು. ಇವರ ಮಕ್ಕಳಾದ ಕವಿತಾ ಲಂಕೇಶ್ ಮತ್ತು ಇಂದ್ರಜಿತ್ ಈಗ ಲಂಕೇಶ್ ಪತ್ರಿಕೆಯನ್ನು ಮುಂದು ವರಿಸಿಕೊಂಡು ಹೋಗುತ್ತಿದ್ದಾರೆ.	
	
(ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ